ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಡುವಿನ ಸಂಭಾಷಣೆಯೊಂದು ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ವೇಳೆ ಬಹಿರಂಗವಾಗಿದೆ. ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿದ್ದ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದು, ಅವರ ಮಾತುಕತೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸಂದರ್ಭದಲ್ಲಿ ತಾಂತ್ರಿಕ ಕಾರಣಗಳಿಂದ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಇತರ ಆರೋಪಿಗಳು ಹೊರಗೆ ತೆರಳಿದ್ದರಿಂದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಆರೋಗ್ಯ ಹಾಗೂ ಜೈಲಿನ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ವಿಡಿಯೋ ಸಂಪರ್ಕ ಕಡಿತಗೊಂಡಿದ್ದರೂ ಆಡಿಯೋ ಸಂಪರ್ಕ ಮುಂದುವರಿದಿದ್ದರಿಂದ ಅವರ ಸಂಭಾಷಣೆ ಕೇಳಿಸಿದೆ ಎಂದು ವರದಿಯಾಗಿದೆ.
ಬೆನ್ನು ನೋವಿನ ಬಗ್ಗೆ ದರ್ಶನ್ ಬಳಿ ವಿಚಾರಿಸಿದ ಪವಿತ್ರಾ
ಸಂಭಾಷಣೆ ವೇಳೆ ಪವಿತ್ರಾ ಗೌಡ ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಊಟ ಆಯಿತೇ, ಬೆನ್ನು ನೋವು ಹೇಗಿದೆ ಹಾಗೂ ಫಿಸಿಯೋಥೆರಪಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ಬೆನ್ನು ನೋವು ಹೆಚ್ಚಾಗಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ಒಂದು ಸೆಷನ್ ಮಾತ್ರ ಪೂರ್ಣಗೊಂಡಿದ್ದು, ಇನ್ನೂ ಚಿಕಿತ್ಸೆ ಮುಂದುವರಿಸಬೇಕಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
‘ಇನ್ನೂ 4-5 ತಿಂಗಳು ತಾಳ್ಮೆಯಿಂದ ಇರು’ಇದೇ ವೇಳೆ ಜೈಲಿನಲ್ಲಿ ಇನ್ನೆಷ್ಟು ದಿನ ಇರಬೇಕಾಗಬಹುದು ಎಂದು ಪವಿತ್ರಾ ಗೌಡ ಪ್ರಶ್ನಿಸಿದ್ದಾರೆ. ಆಗ ದರ್ಶನ್ ಅವರು ಕೈ ಸನ್ನೆಯ ಮೂಲಕ ನಾಲ್ಕು ತಿಂಗಳು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿನ ಪರಿಸ್ಥಿತಿ ನರಕದಂತಾಗಿದೆ, ಇಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದಕ್ಕೆ ಧೈರ್ಯ ತುಂಬಿದ ದರ್ಶನ್, “ಇನ್ನೂ ನಾಲ್ಕು ತಿಂಗಳು ಇರು. ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಬದಲಾವಣೆಯಾಗಬಹುದು. ಈಗಾಗಲೇ ಇಷ್ಟು ದಿನ ಕಳೆದಿದ್ದೀಯ, ಇನ್ನೂ ನಾಲ್ಕರಿಂದ ಐದು ತಿಂಗಳು ತಾಳ್ಮೆಯಿಂದಿರು. ಮಾನಸಿಕವಾಗಿ ಗಟ್ಟಿಯಾಗಿರು” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿನ ಪರಿಸ್ಥಿತಿ ನರಕದಂತಾಗಿದೆ, ಇಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದಕ್ಕೆ ಧೈರ್ಯ ತುಂಬಿದ ದರ್ಶನ್, “ಇನ್ನೂ ನಾಲ್ಕು ತಿಂಗಳು ಇರು. ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಬದಲಾವಣೆಯಾಗಬಹುದು. ಈಗಾಗಲೇ ಇಷ್ಟು ದಿನ ಕಳೆದಿದ್ದೀಯ, ಇನ್ನೂ ನಾಲ್ಕರಿಂದ ಐದು ತಿಂಗಳು ತಾಳ್ಮೆಯಿಂದಿರು. ಮಾನಸಿಕವಾಗಿ ಗಟ್ಟಿಯಾಗಿರು” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಪವಿತ್ರಾ ಗೌಡ ಅವರು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಬದಲಾವಣೆಯ ಬಗ್ಗೆಯೂ ಪ್ರಶ್ನಿಸಿದ್ದು, ಅದಕ್ಕೆ ದರ್ಶನ್ ಹೌದು ಎಂದು ಉತ್ತರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಪರ್ಕ ಮರುಸ್ಥಾಪನೆಯಾಗುತ್ತಿದ್ದಂತೆ ಮೌನವಾದ ಜೋಡಿ
ಇಬ್ಬರೂ ಜೈಲಿನ ಪರಿಸ್ಥಿತಿ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಮತ್ತೆ ಆರಂಭವಾಗಿದೆ. ಸಂಪರ್ಕ ಮರುಸ್ಥಾಪನೆಯಾಗುತ್ತಿದ್ದಂತೆ ದರ್ಶನ್ ಮತ್ತು ಪವಿತ್ರಾ ಗೌಡ ಮಾತುಕತೆ ನಿಲ್ಲಿಸಿ ಮೌನವಾಗಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸಂಭಾಷಣೆಯಲ್ಲಿ ದರ್ಶನ್ ಉಲ್ಲೇಖಿಸಿರುವ ನಾಲ್ಕರಿಂದ ಐದು ತಿಂಗಳ ಅವಧಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಬದಲಾವಣೆಯ ಕುರಿತ ಮಾತುಗಳು ಕುತೂಹಲ ಮೂಡಿಸಿವೆ. ಈ ಮಾತುಗಳು ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದ್ದೇ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಈ ಕುರಿತು ಅಧಿಕೃತ ಸ್ಪಷ್ಟನೆ ಲಭ್ಯವಾಗುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ.
