ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಉಚಿತ ಸೌಲಭ್ಯಗಳ ಘೋಷಣೆಗಳ ನಡುವೆ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುವಂತಾಗಿದೆ. ಈಗಾಗಲೇ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗಿದ್ದು, ಇದರ ಬೆನ್ನಲ್ಲೇ ಹಾಲಿನ ಉತ್ಪನ್ನಗಳ ಬೆಲೆಯೂ ದುಬಾರಿಯಾಗಿದೆ. ಮತ್ತೊಂದೆಡೆ ಬಸ್ ಪ್ರಯಾಣ ದರವೂ ಏರಿಕೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೋಟೆಲ್ಗಳಲ್ಲಿ ಆಹಾರ ಸೇವಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ದೋಸೆ, ಇಡ್ಲಿ, ವಡೆ ಸೇರಿದಂತೆ ಹೋಟೆಲ್ಗಳಲ್ಲಿ ದೊರೆಯುವ ತಿಂಡಿಗಳ ದರವನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ದಿನನಿತ್ಯ ಹೋಟೆಲ್ ಆಹಾರವನ್ನೇ ಅವಲಂಬಿಸಿರುವ ಜನರಿಗೆ ಈ ನಿರ್ಧಾರ ಮತ್ತಷ್ಟು ಹೊರೆಯಾಗಲಿದೆ. ಈಗಾಗಲೇ ಹಾಲಿನ ದರ ಹೆಚ್ಚಳದ ಪರಿಣಾಮವಾಗಿ ಟೀ ಮತ್ತು ಕಾಫಿ ಬೆಲೆ ಏರಿಕೆಯಾಗಿತ್ತು. ಇದೀಗ ತಿಂಡಿ ತಿನಿಸುಗಳ ದರವೂ ಹೆಚ್ಚಳವಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ (BBHA) ಅಧ್ಯಕ್ಷ ಪಿ.ಸಿ. ರಾವ್, ಹೋಟೆಲ್ ಉದ್ಯಮದಲ್ಲಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಹೋಟೆಲ್ಗಳಲ್ಲಿ ಬಳಸುವ ಅಕ್ಕಿಯ ಬೆಲೆ ಕೆ.ಜಿಗೆ 65 ರೂಪಾಯಿಯಿಂದ 95 ರೂಪಾಯಿವರೆಗೆ ಹೆಚ್ಚಾಗಿದೆ. ಇದರ ಜೊತೆಗೆ ಹಾಲು ಹಾಗೂ ಮೊಸರು, ಬೆಣ್ಣೆ, ತುಪ್ಪ, ಪನ್ನೀರ್ನಂತಹ ಹಾಲಿನ ಉತ್ಪನ್ನಗಳ ದರವೂ ಏರಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ, ತರಕಾರಿ ಮತ್ತು ಬೇಳೆಕಾಳುಗಳ ದರ ಹೆಚ್ಚಳವೂ ಹೋಟೆಲ್ ಉದ್ಯಮದ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಲವು ಹೋಟೆಲ್ಗಳು ನಷ್ಟ ಅನುಭವಿಸುತ್ತಿವೆ. ಉದ್ಯಮವನ್ನು ಮುನ್ನಡೆಸಲು ತಿಂಡಿ ತಿನಿಸುಗಳ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಪಿ.ಸಿ. ರಾವ್ ಹೇಳಿದ್ದು. ಒಟ್ಟಿನಲ್ಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಹೋಟೆಲ್ ತಿಂಡಿಗಳ ದರವೂ ಹೆಚ್ಚಳವಾಗುತ್ತಿರುವುದು ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆ ತರಲಿದೆ.

ಹೊಟೆಲ್ಗಳಲ್ಲಿ ಬೆಲೆಗಳು ವ್ಯತ್ಯಸವಿದೆ.
ಇದೀಗ ಹೋಟೆಲ್ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಎಷ್ಟರಮಟ್ಟಿಗೆ ಹೆಚ್ಚಳವಾಗಿದೆ ಎಂಬುದನ್ನು ಗಮನಿಸಿದರೆ, ಸಣ್ಣ ಹೋಟೆಲ್ಗಳಲ್ಲಿ ಟೀ ಮತ್ತು ಕಾಫಿ ದರ ತಲಾ 5 ರೂಪಾಯಿ ಏರಿಕೆಯಾಗಿದೆ. ದೊಡ್ಡ ಹೋಟೆಲ್ಗಳಲ್ಲಿ 10ರಿಂದ 20 ರೂಪಾಯಿವರೆಗೆ ಬೆಲೆ ಹೆಚ್ಚಿಸಲಾಗಿದೆ. ಈ ಹಿಂದೆ 100 ರೂಪಾಯಿ ಇದ್ದ ದೋಸೆಯ ದರ ಇದೀಗ 110ರಿಂದ 115 ರೂಪಾಯಿಗೆ ತಲುಪಿದೆ. 60 ರೂಪಾಯಿ ಇದ್ದ ಪಲಾವ್ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಬೆಲೆ 70ರಿಂದ 75 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು 80ರಿಂದ 100 ರೂಪಾಯಿಗೆ ಲಭ್ಯವಿದ್ದ ಊಟದ ದರ 110ರಿಂದ 120 ರೂಪಾಯಿಗೆ ಏರಿಕೆಯಾಗಿದೆ. ಇಡ್ಲಿ ಮತ್ತು ವಡೆಯ ಬೆಲೆಯಲ್ಲೂ ಹೆಚ್ಚಳ ಕಂಡುಬಂದಿದೆ. ಆದರೆ ಹೋಟೆಲ್ಗಳ ವರ್ಗ ಹಾಗೂ ಸ್ಥಳಕ್ಕೆ ಅನುಗುಣವಾಗಿ ಈ ದರಗಳಲ್ಲಿ ವ್ಯತ್ಯಾಸ ಇರಲಿದೆ.
ಹೆಚ್ಚಿನ ಸುದ್ದಿಗಾಗಿ ಫಾಲೋವ್ ಮಾಡಿ ಫೋಕಸ್ ಟಿವಿ ಕನ್ನಡ
