MLA Byrati Basavaraj | Bikla Shiva Murder Case | 12ಗುಂಟೆಗೆ ಬೀಳಿಸಿದ್ರು ಹೆಣ, MLA ಬೈರತಿಗೆ ಇದು ಬೇಕಿತ್ತಾ?
ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಿಂದ ಅಜ್ಞಾನ ಸ್ಥಳದಲ್ಲಿದ್ದಾರೆ. ಭಾರತೀನಗರ ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ನಲ್ಲಿ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕನಿಗೆ ಮುಳುವಾಗಿದ್ದು ಆ ಒಂದು ಸಣ್ಣ ಕಾರಣ. ಹಾಗಾಗಿ ಈಗ ಲಕ್ಷೋಪಲಕ್ಷ ಜನರ ಜನರಿಂದ ವಿಧಾನಸಭೆಗೆ ಆಯ್ಕೆಯಾದ ಶಾಸಕ ಬಂಧನ ಭೀತಿಯಿಂದ ಊರೂರು ಅಲೆದಾಡುವಂತೆ ಮಾಡಿದೆ. ಇಷ್ಟಕ್ಕೂ ಏನದು ಕಾರಣ..?
ಹೌದು, ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿದ್ದಾರೆ. CID ಪೊಲೀಸರು ಮೂರು ತಂಡಗಳನ್ನು ಮಾಡಿಕೊಂಡು ಮಹಾರಾಷ್ಟ್ರ ಸೇರಿ ವಿವಿಧೆಡೆ ಶೋಧ ಮುಂದುವರಿಸಿದ್ದಾರೆ. ಆದರೂ ಶಾಸಕನ ಸುಳಿವು ಮಾತ್ರ ಸಿಗುತ್ತಿಲ್ಲ. ಶಾಸಕ ಬೈರತಿ ಬಸವರಾಜುಗೆ ಬೇಲ್ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ. ಹೀಗಾಗಿ ಬಂಧನದಿಂದ ಪಾರಾಗಲು ಅಜ್ಞಾತ ಸ್ಥಳದಿಂದಲೇ ಬೇಲ್ ಪಡೆಯಲು ವಕೀಲರ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯ ವಿಚಾರಣೆ ರಜಾಪೀಠದ ಮುಂದೆ ಬರುವುದರಿಂದ ಇದು ತ್ವರಿತವಾಗಿ ವಿಚಾರಣೆಗೆ ಬರುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಬೇಲ್ ಸಿಗುವವರೆಗೆ ಬಸವರಾಜು ಅವರು CIDಗೆ ಸಿಗದೆ ಅಜ್ಞಾತ ಸ್ಥಳದಲ್ಲೇ ಇರಲು ನಿರ್ಧರಿಸಿದ್ದಾರೆ.
K R Puram ಶಾಸಕ ಬಸವರಾಜು ಆ ವಿವಾದದಲ್ಲಿ ಮೂಗು ತೂರಿಸಿದ್ರಾ..?
ಇಲ್ಲಿ ಗಮನಾರ್ಹ ಎಂದರೆ ಐಷಾರಾಮಿ ಜೀವನ ನಡೆಸುತ್ತಿದ್ದ ಶಾಸಕ ಈಗ ಬಂಧನ ಭೀತಿಯಿಂದ ಊರೂರು ಅಲೆದಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ. ಸ್ವತಃ ಅವರೇ. ಅದೂ ಕೂಡ ಕೇವಲ 12 ಗುಂಟೆ ತುಂಡು ಭೂಮಿಗಾಗಿ. ಅದೂ ನೇರವಾಗಿ ತಮಗೆ ಲಾಭ ಮಾಡಿಕೊಳ್ಳಲು ಅಲ್ಲವೇ ಅಲ್ಲ. ತಮ್ಮ ಆಪ್ತರನ್ನು ಮೆಚ್ಚಿಸಲು ತಾವಾಗಿಯೇ ಈ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡರಾ..? ಅದರಲ್ಲೂ ಒಬ್ಬ ರೌಡಿಶೀಟರ್ ಒತ್ತುವರಿ ಮಾಡಿಕೊಂಡಿದ್ದ ತುಂಡು ಭೂಮಿಯನ್ನು ಮತ್ತೊಬ್ಬ ರೌಡಿ ಶೀಟರ್ಗೆ ಕೊಡಿಸಲು ಪಾತ್ರ ವಹಿಸಿದರಾ..? ಕೆ.ಆರ್.ಪುರಂ ಸಮೀಪದ ಕಿತ್ತಿಗನೂರಿನ ಸರ್ವೆ ನಂಬರ್ 212ರಲ್ಲಿ ಬಿಕ್ಲು ಶಿವ ಒತ್ತುವರಿ ಮಾಡಿಕೊಂಡಿದ್ದ 12 ಗುಂಟೆ ಭೂಮಿಯನ್ನು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹೆಣ್ಣೂರಿನ ರೌಡಿ ಶೀಟರ್ ಜಗದೀಶ್ ಅಲಿಯಾಸ್ ಜಗ್ಗನ ಮೆಚ್ಚಿಸಲು ಶಾಸಕ ಬಸವರಾಜು ಆ ವಿವಾದದಲ್ಲಿ ಮೂಗು ತೂರಿಸಿದ್ರಾ..? ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ… ಕಿತ್ತಿಗನೂರಿನ 12 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಬಿಕ್ಲು ಶಿವ ಅದಕ್ಕೆ ಬೇಲಿ ಹಾಕಿದ್ದ. ಅದರೊಳಗೆ 2 ತಾತ್ಕಾಲಿಕ ಶೆಡ್ ನಿರ್ಮಿಸಿದ್ದ. ಅದನ್ನು ನೋಡಿಕೊಳ್ಳಲಯ ಇಬ್ಬರು ಮಹಿಳೆಯರನ್ನು ನೇಮಿಸಿದ್ದ. ಆದರೆ, ಇದನ್ನು ಸಹಿಸದ ಜಗ್ಗ ಆ ಶೆಡ್ಗಳಲ್ಲಿ ದಾಂಧಲೆ ಮಾಡಿದ್ದ. ಅಲ್ಲದೆ, ಮಹದೇವಪುರದಲ್ಲಿ ಶಾಸಕ ಬೈರತಿ ಬಸವರಾಜು ಅವರ ಆಪ್ತರಿಗೆ ಸೇರಿದ ಭೂ ವಿವಾದದಲ್ಲೂ ಬಿಕ್ಲು ಶಿವ ಮೂಗು ತೂರಿಸಿದ್ದ. ಈ ಬಗ್ಗೆ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ ಶಾಸಕ ಬೈರತಿ ಬಸವರಾಜು ಕಡೆಯಿಂದ ಜೀವಬೆದರಿಕೆ ಇದೆ ಎಂದು ಬಿಕ್ಲುಶಿವ ಪೊಲೀಸ್ ಕಮಿಷನರ್ ಮೊರೆ ಹೋಗಿದ್ದ.
ಇದಾದ ಮೇಲೆ 2025ರ ಫೆಬ್ರವರಿಯಲ್ಲಿ ಶಾಸಕ ಬೈರತಿ ಬಸವರಾಜು ತನ್ನ ಆಪ್ತರ ಜೊತೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳಕ್ಕೆ ಹೋಗಿದ್ದರು. ಅಲ್ಲಿಯೇ ಬಿಕ್ಲು ಕೊಲೆಗೆ ಮುಹೂರ್ತ ನಿಗದಿಯಾಗಿತ್ತು ಎನ್ನಲಾಗಿದೆ. ಇಷ್ಟರಲ್ಲೇ ಬಿಕ್ಲು ಶಿವನ ಮೇಲೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಯತ್ನ ನಡೆದಿತ್ತು. ಇಷ್ಟರಲ್ಲೇ ಯೂಟ್ಯೂಬ್ನಲ್ಲಿ ಬಿಕ್ಲು ಶಿವ ಜಗ್ಗನ ಮೇಲೆ ಕೆಟ್ಟದಾಗಿ ಹೇಳಿದ್ದಾಗಿ ಸುದ್ದಿ ಹಬ್ಬಿತ್ತು ಎನ್ನಲಾಗಿದೆ. ಇದರಿಂದ ಕೆರಳಿದ್ದ ಜಗ್ಗ ಕೋಲಾರದ ಮಾಲೂರಿನಿಂದ ತನ್ನ ಹುಡುಗರನ್ನು ಕರೆಸಿ ಜುಲೈ 15ರಂದು ಬಿಕ್ಲು ಶಿವನ ಕೊಲೆ ಮಾಡಿಸಿದ್ದ ಎಂದು ಹೇಳಲಾಗಿದೆ. CID ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಜಗ್ಗನ ವಿರುದ್ಧ ದಾಖಲಾಗಿದ್ದ ರೌಡಿಶೀಟ್ ಪಟ್ಟಿ ಇದ್ದಕ್ಕಿದ್ದಂತೆ ತೆರವಾಗಿತ್ತು. ಇದರಲ್ಲಿ ಶಾಸಕ ಬೈರತಿ ಪ್ರಭಾವ ಇದೆ ಎಂದು ಹೇಳಲಾಗುತ್ತಿತ್ತು. ಇದು ಬಿಕ್ಲು ಶಿವನನ್ನು ಕೆರಳಿಸಿತ್ತು ಎನ್ನಲಾಗಿದೆ. ಇದು ಕೂಡ ಬಿಜೆಪಿ ಶಾಸಕನಿಗೆ ಮುಳುವಾಗುತ್ತಾ..? ಗೊತ್ತಿಲ್ಲ. ಒಟ್ಟಾರೆ ಏನೇ ಆಗಲಿ ಬಿಕ್ಲು ಶಿವನ ಕೊಲೆಯಲ್ಲಿ ಶಾಸಕ ಬೈರತಿ ಬಸವರಾಜು ಪಾತ್ರ ಇದೆಯೋ ಇಲ್ಲವೋ ಅದು ತನಿಖೆಯಲ್ಲೇ ತೇಲಬೇಕಿದೆ. ಆದರೆ, ಕೇವಲ 12 ಗುಂಟೆ ತುಂಡುಭೂಮಿಗಾಗಿ ಲಕ್ಷಾಂತರ ಜನರ ಜನಪ್ರತಿನಿಧಿ ಶಾಸಕನೊಬ್ಬ ಬಂಧನಭೀತಿಯಿಂದ ಊರೂರು ಅಲೆದಾಡುತ್ತಾ..? ಅಜ್ಞಾತ ಸ್ಥಳದಲ್ಲಿ ಅವಿತುಕೊಳ್ಳುವಂತಾಗಿದ್ದು ಮಾತ್ರ ವಿಪರ್ಯಾಸ.
===============
