ಕರ್ನಾಟಕ v/s ಕೇರಳ ʼಕೋಗಿಲುʼ ಕದನ | Karnataka v/s Kerala
ಕರ್ನಾಟಕ-ಕೇರಳ ನೆರೆ ರಾಜ್ಯಗಳು. ಅನ್ಯೋನ್ಯ ಬಾಂಧವ್ಯ ಹೊಂದಿವೆ. ಆದರೂ ಗಡಿ ವಿವಾದ ಇತ್ಯರ್ಥಗೊಂಡಿಲ್ಲ. ಮೊದಲಿನಿಂದಲೂ ನಾನಾ ನೀನಾ ಅಂತಾ ಕರ್ನಾಟಕ-ಕೇರಳ ಸಂಘರ್ಷಕ್ಕಿಳಿದಿವೆ. ಕೋರ್ಟ್ ಮೆಟ್ಟಿಲೇರಿದ್ದೂ ಆಗಿದೆ. ಆದರೂ ಗಡಿ ವಿವಾದ ಕಗ್ಗಂಟಾಗಿಯೇ ಉಳಿದಿದೆ. ಈಗ ರಾಜ್ಯ ರಾಜಧಾನಿಯಲ್ಲೇ ಕೇರಳ ಸರ್ಕಾರ ಕ್ಯಾತೆ ತೆಗೆದಿದೆ. ಇದು ದೆಹಲಿ ಮಟ್ಟದವರೆಗೆ ಭಾರಿ ಚರ್ಚೆಗೀಡಾಗಿದೆ. ಏನಿದು ಪ್ರಕರಣ ಅಂತೀರಾ..?
ಹೌದು, ಗಡಿ ವಿವಾದದ ಹೊರತಾಗಿಯೂ ಕರ್ನಾಟಕ-ಕೇರಳ ಗಡಿ ವಿವಾದದ ಹೊರತಾಗಿಯೂ ಹೊಸ ವಿವಾದ ಭುಗಿಲೆದ್ದಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ತೆಗೆದ ಆ ಕ್ಯಾತೆ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಧರ್ಮಸಂಕಟ ತಂದೊಡ್ಡಿದೆ. ಇದು ಕೈಕಮಾಂಡ್ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ವಿವಿಧ ಸಚಿವರು ಕೇರಳ ಸಿಎಂ ವಿರುದ್ಧ ಮುಗಿಬಿದ್ದಿದ್ದಾರೆ.
ಇಷ್ಟಕ್ಕೂ ಕೇರಳ ಸಿಎಂ ಕರ್ನಾಟಕ ಸರ್ಕಾರದ ವಿರುದ್ಧ ತೆಗೆದಿರುವ ಆ ಕ್ಯಾತೆ ಏನು..? ಅದು ಅಷ್ಟೊಂದು ಮಹತ್ವ ಪಡೆದುಕೊಂಡಿದ್ದೇಕೆ..? ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಮಂತ್ರಿಮಂಡಲವನ್ನೇ ಕೆರಳುವಂತೆ ಮಾಡಿದ್ದೇಕೆ..? ಕೈಕಮಾಂಡ್ ನಾಯಕರು ಕೂಡ ಮಧ್ಯಪ್ರವೇಶಿಸಿದ್ದೇಕೆ..? ಕೇರಳ ಸಿಎಂ ವಿಜಯನ್ ತೆಗೆದ ಕ್ಯಾತೆ ಅಷ್ಟೊಂದು ಹಲ್ಚಲ್ ಸೃಷ್ಟಿಸಿದ್ದೇಕೆ ಎಂಬುದನ್ನು ನೋಡುವುದಾದರೆ..
ಹೌದು, ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಳಿ ಅಕ್ರಮವಾಗಿ ತಗಡಿನ ಮನೆಗಳನ್ನು ನಿರ್ಮಿಸಿಕೊಂಡಿದ್ದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳನ್ನು ಸರ್ಕಾರ ತೆರವುಗೊಳಿಸಿತ್ತು. ಇದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಕೆರಳಿಸಿತ್ತು. ಇದಕ್ಕೆ ಪ್ರಮುಖ ಕಾರಣವೂ ಇದೆ. ಅದೇನೆಂದರೆ.. ಅಲ್ಲಿ ಸಣ್ಣ ಸಣ್ಣ ಮನೆಗಳಲ್ಲಿ ವಾಸವಿದ್ದವರು ಕೇರಳ ಮೂಲದವರಾಗಿದ್ದರು. ಅವರು ಮುಸ್ಲಿಮರಾಗಿದ್ದರು. ಇಲ್ಲಿ ಅವರ ಧರ್ಮ ಹೇಳುತ್ತಿರುವುದಕ್ಕೂ ಕಾರಣವಿದೆ. ಇದನ್ನು ಮುಂದೆ ಹೇಳುತ್ತೇವೆ. ಹೀಗೆ ಸಿದ್ದರಾಮಯ್ಯ ಸರ್ಕಾರ ಈ ಕುಟುಂಬಗಳನ್ನು ಒಕ್ಕಲೆಬ್ಬಿಸಿದೆ ಎಂದು ಕೇರಳ ಸಿಎಂ ವಿಜಯನ್ ಆಕ್ರೋಶಭರಿತವಾಗಿ ಪ್ರತಿಕ್ರಿಯಿಸಿದ್ದರು.
ಕೋಗಿಲು ಸಂಘರ್ಷ :
ಇದು ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಚಿವರನ್ನು ಕೆರಳಿಸಿದೆ. ಹಾಗಾಗಿಯೇ ಸ್ಟ್ರಾಂಗ್ ಆಗಿಯೇ ತಿರುಗೇಟು ನೀಡಿದ್ದಾರೆ. ಅವರೆಲ್ಲರೂ ಅಕ್ರಮವಾಗಿ ಅಲ್ಲಿ ನೆಲೆಸಿದ್ದರು. ಹಾಗಾಗಿಯೇ ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ನಮ್ಮ ಸರ್ಕಾರಕ್ಕೂ ಮಾನವೀಯತೆ ಇದೆ. ಇದನ್ನು ನಾವು ಕೇರಳ ಸಿಎಂ ಕಡೆಯಿಂದ ಕಲಿಯುವ ಅವಶ್ಯಕತೆ ನಮಗಿಲ್ಲ. ಸತ್ಯಾಂಶ ತಿಳಿದು ಮಾತನಾಡಲಿ ಎಂದು ಕಾಂಗ್ರೆಸ್ ನಾಯಕರು ಕೇರಳ ಸಿಎಂಗೆ ತಿರುಗೇಟು ನೀಡಿದ್ದಾರೆ.
ಇದು ಕಾಂಗ್ರೆಸ್ ಹಾಗೂ ಎಡಪಕ್ಷಗಳ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಇದರಿಂದ ಎಚ್ಚೆತ್ತ ಕೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೇರಳದವರೇ ಆದ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಧ್ಯಪ್ರವೇಶಿಸಿದ್ದಾರೆ. ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ಎಚ್ಚರ ವಹಿಸಬೇಕಿದೆ ಎಂದಿದ್ದಾರೆ. ಇದೂ ಅಲ್ಲದೆ, ಕೇರಳ ಸಂಸದರ ನಿಯೋಗ ಹಾಗೂ ಕೇರಳ ಶಾಸಕರ ನಿಯೋಗವೂ ಭೇಟಿ ನೀಡಿ ಪರಿಶೀಲಿಸಿದೆ. ಇದು ಬಿಜೆಪಿಗೆ ಪ್ರಬಲ ಅಸ್ತ್ರವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆದರೆ, ಕೆ.ಸಿ.ವೇಣುಗೋಪಾಲ್ ಕೇರಳದವರಾದರೂ ಕರ್ನಾಟಕದ ಸೂಪರ್ ಸಿಎಂ ಎಂದು ಬಿಜೆಪಿಗರು ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ ಮುಸ್ಲಿಂ ಮುಖಂಡರಾದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಕೇರಳ ಸರ್ಕಾರ ಮಧ್ಯಪ್ರವೇಶಿಸಬೇಕಾದ ಸ್ಥಿತಿ ಬಂದಿದ್ದು ನಾಚಿಕೆಗೇಡು ಎಂದಿದ್ದಾರೆ.
ಒಟ್ಟಾರೆ, ಕೋಗಿಲು ಲೇಔಟ್ ಬಳಿ 200 ಕುಟುಂಬಗಳು ವಾಸವಿದ್ದ ನಿವಾಸಗಳನ್ನು ಸರ್ಕಾರ ತೆರವುಗೊಳಿಸಿದ್ದು, ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳ ಸಂಘರ್ಷಕ್ಕೆ ದಾರಿ ಮಾಡಿದೆ. ಇಷ್ಟಕೂ ಕೇರಳ ಸಿಎಂ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಕಾರಣವೂ ಇದೆ. ಅದೇನೆಂದರೆ. ಇಲ್ಲಿ ಸಂತ್ರಸ್ತರಾದವರಲ್ಲಿ ಸಾಕಷ್ಟು ಜನ ಮುಸ್ಲಿಮರು. ಇದನ್ನೇ ಬಂಡವಾಳ ಮಾಡಿಕೊಳ್ಳಲು ವಿಜಯನ್ ತಂತ್ರ ಮಾಡಿದ್ದಾರೆ.
ಅದೇನೆಂದರೆ, ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದರೂ ಮುಸ್ಲಿಮರನ್ನೇ ಒಕ್ಕಲೆಬ್ಬಿಸುತ್ತಿದೆ. ಇಂತಹ ಕಾಂಗ್ರೆಸ್ಸನ್ನು ನೀವು ಬೆಂಬಲಿಸುತ್ತೀರಾ ಎಂಬುದನ್ನು ಬಿಂಬಿಸಲು ಕೇರಳ ಸಿಎಂ ತಂತ್ರಗಾರಿಕೆ ಮಾಡಿದ್ದಾರೆ. ಆದರೆ, ಇದಕ್ಕೆಲ್ಲಾ ಸಿದ್ದರಾಮಯ್ಯ & ಟೀಂ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ ಈ ವಿಚಾರದಲ್ಲಿ ಕೆ.ಸಿ.ವೇಣುಗೋಪಾಲ್ ಮುತುವರ್ಜಿ ವಹಿಸಿರುವುದು ಬಿಜೆಪಿಗೆ ಅಸ್ತ್ರವಾಗಿದೆ. ಇದು ಮುಂದೆಲ್ಲಿ ತಲುಪಲಿದೆ ಎಂಬುದೇ ಸದ್ಯದ ಕುತೂಹಲ.
Also Read : Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!
