Janardhan Reddy V/S Bharath Reddy | ರೆಡ್ಡಿ vs ರೆಡ್ಡಿ, ರಕ್ತ ರಾಜಕೀಯ !
ಬಳ್ಳಾರಿ : ನಾಳೆ ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬರು ಸಾವವ್ನಪ್ಪಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ನಗರದಲ್ಲಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ನಿನ್ನೆ ನಡೆದ ಘಟನೆಯೇನು ?
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನೂಬ್ಬ ಗುಂಡೇಟಿಗೆ ಬಲಿಯಾದ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಈ ಘಟನೆ ನಡೆದಿದೆ. ನಾಳೆ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಬ್ಯಾನರ್ಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ, ಅವಂಬಾವಿಯ ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಅಳವಡಿಸುವುದನ್ನು ರೆಡ್ಡಿ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷವೇ ನಡೆದುಹೋಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಸಾವಿರಾರು ಬೆಂಬಲಿಗರು ಬಡಿಗೆ, ಕಬ್ಬಿಣದ ರಾಡ್, ಕಲ್ಲು ಹಿಡಿದು ಬಡಿದಾಡಿಕೊಂಡಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಗೋಲಿಬಾರ್ ನಡೆಸಿದ್ದಾರೆ. ಈ ವೇಳೆ ಗುಂಡೇಟಿಗೆ ಓರ್ವ ಯುವಕ ಬಲಿಯಾಗಿದ್ದಾನೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಬ್ಯಾನರ್ ಕಟ್ಟುವ ವಿಚಾರ…!
ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿ ಹುಸೇನ ನಗರದ ರಾಜಶೇಖರ (28) ಎಂದು ಹೇಳಲಾಗಿದೆ. ಆತ ತಮ್ಮ ಬೆಂಬಲಿಗ ಎಂದು ಕಾಂಗ್ರೆಸ್ ಶಾಸಕ ನಾರಾ ಭರತರಡ್ಡಿ ತಿಳಿಸಿದ್ದಾರೆ. ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಈ ಘಟನೆ ನಡೆದಿದೆ. ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಿಮಿತ್ತ ನಗರದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ ರಡ್ಡಿ ಭಾವಚಿತ್ರವಿದ್ದ ಬ್ಯಾನರ್ಗಳನ್ನು ಕಟ್ಟಲಾಗಿದೆ. ಅಂತೆಯೇ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರಿನ ಜಾಗದಲ್ಲೂ ಕಟ್ಟಲಾಗಿತ್ತು. ಅದನ್ನು ಕಂಡು ಜನಾರ್ದನ ರೆಡ್ಡಿ ಬ್ಯಾನರ್ ತೆರವುಗೊಳಿಸಿದ್ದೇ ಘರ್ಷಣೆಗೆ ಕಾರಣವಾಗಿದೆ.
ಬ್ಯಾನರ್ ತೆರವುಗೊಳಿಸಿದ ಸುದ್ದಿ ತಿಳಿದ ಕೂಡಲೇ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಮನೆ ಎದುರು ರಸ್ತೆಲ್ಲೇ ಪುನಃ ಬ್ಯಾನರ್ ಕಟ್ಟಿಸಿದರು ಎನ್ನಲಾಗಿದೆ. ಗಲಾಟೆ ಮಾಡುತ್ತಿರುವುದನ್ನು ತಿಳಿದು ಸ್ಥಳಕ್ಕೆ ಬಂದ ಶ್ರೀರಾಮುಲು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಅದ್ರೆ, ಅವ್ರ ಮಾತು ಕೇಳದ ಭರತ ರಡ್ಡಿ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದಾರೆ. ಇತ್ತ ಜನಾರ್ದನ ರಡ್ಡಿ ಬೆಂಬಲಿಗರೂ ಕೂಡ ಘರ್ಷಣೆಗೆ ಇಳಿದಿದ್ದಾರೆ. ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆ ಗುಂಡಿನ ಖಾಲಿ ಕೊಳವೆ ಪ್ರದರ್ಶಿಸಿದ ಜನಾರ್ದನ ರೆಡ್ಡಿ ಇದು ನನ್ನ ಹತ್ಯೆಗೆ ನಡೆದ ಯತ್ನ ಎಂದು ಆರೋಪಿಸಿ ತಮ್ಮ ಗುಂಪಿನೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆದರೆ ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ.
ಗೃಹಸಚಿವ ಡಾ. ಜಿ ಪರಮೇಶ್ವರ್ ಘಟನೆ ಬಗ್ಗೆ ಶಾಸಕ ಭರತ್ ರೆಡ್ಡಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಜನಾರ್ದನ ರೆಡ್ಡಿ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಠಿಕಾಣಿ ಹೂಡಿದ್ದರೆ, ಇತ್ತ ಶ್ರೀರಾಮುಲು ರೆಡ್ಡಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. ಮೃತನ ಕಾರ್ಯಕರ್ತನ ದೇಹ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಟ್ಟಾರೆ, ಬ್ಯಾನರ್ ವಿಚಾರವೊಂದು ಈ ರೀತಿಯ ಘಟನೆಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.
=====================
Related Article : Bellary Mining Scam Returns: Will Reddy Face Jail..? | ಮತ್ತೆ ಗಡಿಯಲ್ಲಿ ಗಣಿ ಲೂಟಿ, ಜೈಲು ಪಾಲಾಗ್ತಾರಾ ರೆಡ್ಡಿ.?
