Indo-Pak War | US-China Credit War | ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದೇ ನಾವೆಂದ ಚೀನಾ..!
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ವಿರಾಮಕ್ಕೆ ಮಧ್ಯವರ್ತಿಯಾಗಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಹೀಗೆ ಅವರು ಹಲವಾರು ಬಾರಿ ಹೇಳಿದ್ದನ್ನೇ ಹೇಳುತ್ತಾ ಬಂದಿದ್ದಾರೆ. ಈ ಬೆನ್ನಲ್ಲೇ ಇದೀಗ ಚೀನಾ ಸಹ ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಶಾಂತಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದೇ ನಾವೆಂದು ಜಂಭ ಕೊಚ್ಚಿಕೊಂಡಿದೆ. ಇದ್ಹೇಗೆ ಅಂತೀರಾ..?
ಹೌದು, ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ರಕ್ಷಣಾ ಇಲಾಖೆ ಆಪರೇಷನ್ ಸಿಂಧೂರ ನಡೆಸಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಭಾರತೀಯ ವೈಮಾನಿಕ ದಾಳಿಗೆ ಪಾಕ್ ಸೇನೆ ಪತರಗುಟ್ಟಿ ಹೋಗಿತ್ತು. ಹೀಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ 2025ರ ಮೇ 7 ರಿಂದ 10ರ ಸಂಘರ್ಷವನ್ನು ಎರಡೂ ದೇಶಗಳ ಸೇನೆಗಳ ಡಿಜಿಎಂಒಗಳು ಸಂಧಾನ ಮಾಡಿಕೊಂಡು ಕದನ ವಿರಾಮ ಘೋಷಿಸಿದ್ದರು.
ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ನಡುವಿನ ನೇರ ಮಾತುಕತೆಯ ಮೂಲಕ ಈ ಸಮಸ್ಯೆ ಪರಿಹರಿಸಲಾಗಿದೆ ಎಂದು ಭಾರತ ಹೇಳುತ್ತಲೇ ಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಶಮನಗೊಳಿಸುವಲ್ಲಿ ಯಾವುದೇ ಮೂರನೇ ದೇಶದ ಪಾತ್ರವಿಲ್ಲ ಎಂದೂ ಭಾರತ ಸ್ಪಷ್ಟಪಡಿಸಿತ್ತು. ಇಲ್ಲಿ ಗಮನಾರ್ಹ ಎಂದರೆ ವಿದೇಶಾಂಗ ಸಚಿವಾಲಯವು 2025ರ ಮೇ 13ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ವಿರಾಮದ ಕುರಿತಂತೆ ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿತ್ತು.
ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದೇ ನಾವೆಂದ ಚೀನಾ….!
ಮೇ10 ರಂದು ಮಧ್ಯಾಹ್ನ 3:35ಕ್ಕೆ ಆರಂಭವಾದ ಎರಡೂ ದೇಶಗಳ ಡಿಜಿಎಂಒಗಳ ನಡುವಿನ ದೂರವಾಣಿ ಕರೆಯ ಚರ್ಚೆಯ ಮೂಲಕ ಯುದ್ಧ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಯಿತು ಎಂದು ತಿಳಿಸಿತ್ತು. ಇಷ್ಟಾದ್ರೂ ಟ್ರಂಪ್ ಬೇರೆಯದ್ದೇ ಹೇಳಿಕೆ ನೀಡಿದ್ದರು. ವ್ಯಾಪಾರದ ಅಂಶವನ್ನು ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವೆ ಅಮೆರಿಕವೇ ಯುದ್ಧ ವಿರಾಮವನ್ನು ಸಾಧಿಸಿದೆ ಎಂದು ಹೇಳಿದ್ದರು. ಇದನ್ನು ಖಂಡಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹಲವು ಬಾರಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದಾಗ್ಯೂ ಟ್ರಂಪ್ ಮಾತ್ರ ತಮ್ಮ ಚಾಳಿ ಮುಂದುವರಿಸಿದ್ದರು.
ಹೀಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ವಿರಾಮಕ್ಕೆ ಮಧ್ಯವರ್ತಿಯಾಗಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಬೆನ್ನಲ್ಲೇ ಇದೀಗ ಚೀನಾ ಸಹ ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಶಾಂತಿಗೆ ಮಧ್ಯವರ್ತಿಯಾಗಿ ಚೀನಾ ಕೆಲಸ ಮಾಡಿದ್ದಾಗಿ ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಹೇಳಿದ್ದಾರೆ.
2ನೇ ವಿಶ್ವಯುದ್ಧದ ನಂತರ ಈ ವರ್ಷದಲ್ಲಿ ಭೌಗೋಳಿಕ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪನೆಗೆ ಸಂಘರ್ಷದ ಲಕ್ಷಣ ಮತ್ತು ಮೂಲದ ಬಗ್ಗೆ ಗಮನ ಕೇಂದ್ರೀಕರಿಸಿದ್ದೆವು. ಇದರನ್ವಯ, ವಿಶ್ವದ ಹಾಟ್‌ಸ್ಪಾಟ್ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಆ ಪೈಕಿ, ಉತ್ತರದ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಶಮನ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಸಂಘರ್ಷ, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷ ಶಮನದಲ್ಲಿ ಪಾತ್ರ ವಹಿಸಿದ್ದೇವೆ ಎಂದು ವಾಂಗ್ ಯಿ ಅವರು ತಿಳಿಸಿದ್ದಾರೆ. ಈ ವರ್ಷ ಚೀನಾ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡುಕೊಂಡ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಆಪರೇಷನ್ ಸಿಂಧೂರದ ವಿಷಯವನ್ನೂ ಸೇರಿಸಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತ ವಿಚಾರ ಸಂಕಿರಣವನ್ನುದ್ದೇಶಿಸಿ ವಾಂಗ್ ಯಿ ಹೀಗೆ ಮಾತನಾಡಿದ್ದಾರೆ.
ಇಷ್ಟಕ್ಕೂ ಆಪರೇಷನ್ ಸಿಂಧೂರ ಬಗ್ಗೆ ಚೀನಾ ಮಾಡಿದ್ದಿಷ್ಟೇ. ಅದೇನೆಂದರೆ, ರಾಜತಾಂತ್ರಿಕವಾಗಿ, 2025ರ ಮೇ 7ರಂದು ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸುವಂತೆ ಕರೆ ನೀಡಿತ್ತು. ಇದನ್ನೇ ಮಧ್ಯಸ್ಥಿಕೆ. ಯುದ್ಧವಿರಾಮ ಎಂದು ಆ ದೇಶದ ವಿದೇಶಾಂಗ ಸಚಿವ ವಾಂಗ್ ಯಿ ಕರೆದಿರುವುದು ಹಾಸ್ಯಾಸ್ಪದ. ಇನ್ನೂ ಗಮನಾರ್ಹ ಎಂದರೆ ಆಪರೇಷನ್ ಸಿಂಧೂರ ವೇಳೆ ಭಾರತದ ವಿರುದ್ಧವೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಚೀನಾ ಮೇಲಿದೆ. ಆದಾಗ್ಯೂ ಹೀಗೆಲ್ಲಾ ಸುಳ್ಳು ಹೇಳಿದೆ ನೋಡಿ.
================================
Read Must : Bellary Mining Scam Returns: Will Reddy Face Jail..? | ಮತ್ತೆ ಗಡಿಯಲ್ಲಿ ಗಣಿ ಲೂಟಿ, ಜೈಲು ಪಾಲಾಗ್ತಾರಾ ರೆಡ್ಡಿ.?
