Hasanamba Temple | Faith or Fact? | ದೀಪ ಆರಲ್ಲ.. ಹೂ ಬಾಡಲ್ಲ.. ವಿಜ್ಞಾನಕ್ಕೆ ಸವಾಲಾದ ರೋಚಕ ಕಥೆ
ನಾವು ಹೇಳೋಕೆ ಹೊರಟಿರೋದು ಹಚ್ಚಿದ ದೀಪ ಆರದ ಕಥೆಯನ್ನು. ತಾಯಿಗೆ ಮುಡಿಸಿದ ಹೂ ಬಾಡದ ಸ್ಟೋರಿಯನ್ನ. ದೇವಿಗೆ ಇಟ್ಟ ನೈವೇದ್ಯ ತಿಂಗಳುಗಳ ಕಾಲ ಕೆಡದ ಕಥೆಯನ್ನ. ಇದು ವಿಜ್ಞಾನಕ್ಕೂ ಸವಾಲೆಸೆಯುವ ವಿಚಾರ. ಭಕ್ತರು ಬೇಡುವ ವರವನ್ನು ಕೊಡುವ ತಾಯಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುತ್ತಾಳೆ. ಆದಿಶಕ್ತಿ ಸ್ವರೂಪಿಣಿಯೇ ಇಲ್ಲಿ ನೆಲೆಸಿದ್ದಾಳೆ. ಹೌದು.. ಹಾಸನಾಂಬೆ ದೇವಿಯ ಬಗ್ಗೆ ನಿಮಗೆ ಗೊತ್ತಿರದ ವಿಚಾರವನ್ನ ಹೇಳ್ತೀವಿ ಕೇಳಿ.
ಹಾಸನಾಂಬೆ.. ಹಾಸನದಲ್ಲಿ ನೆಲೆಸಿರುವ ಈ ದೇವಿ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಹಾಸನಾಂಬ ದೇಗುಲದಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ಮಹೋತ್ಸವ ಆಚರಿಸಲಾಗುತ್ತದೆ. ನಾಡಿನಾ ನಾನಾ ಭಾಗಗಳು ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಭಕ್ತಾಧಿಗಳ ಇಷ್ಟಾರ್ಥವನ್ನು ಕರುಣಿಸುವ ಹಾಸನಾಂಬೆ ಎಲ್ಲರಿಗೂ ದರ್ಶನ ಕೊಡುವುದು ವರ್ಷಕ್ಕೆ ಒಮ್ಮೆ ಮಾತ್ರವೇ.
ಪ್ರತೀ ವರ್ಷ ಅಶ್ವೀಜ ಮಾಸದ ಪೌರ್ಣಮಿಯ ನಂತರ ಬರುವ ಮೊದಲ ಗುರುವಾರದಂದು ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೇ ದಿನವೇ ಹಾಸನಾಂಬೆ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುತ್ತದೆ. ಬಾಗಿಲು ಹಾಕುವ ಮುನ್ನ ದೇವಿಗೆ ದೀಪ ಹಚ್ಚಿ, ಅಕ್ಕಿ ನೈವೇದ್ಯ ಇಟ್ಟು, ಅಲಂಕಾರ ಮಾಡಲಾಗುತ್ತದೆ. ಇವೆಲ್ಲವೂ ಮುಂದಿನ ವರ್ಷ ಹಾಳಾಗದೇ ಇರುವುದು ಮಾತ್ರ ದೇವಿಯ ಪವಾಡ.
ಒಟ್ಟು 14 ದಿನಗಳ ಕಾಲ ಹಾಸನಾಂಬೆ ದೇಗುಲದ ಗರ್ಭಗುಡಿಯನ್ನ ತೆರೆದು ದೇವಿಯ ದರ್ಶನ ಪಡೆಯಬಹುದು. ಈ ಸಂದರ್ಭದಲ್ಲಿ ನಾನಾ ಹರಕೆಗಳನ್ನು ಹೊತ್ತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಭಕ್ತಿಯಿಂದ ಬೇಡಿದರೆ ಸಂಕಷ್ಟ ದೂರ !
ವಿವಾಹ ಸಮಸ್ಯೆ ಇರುವವರು, ಅನಾರೋಗ್ಯ ಪೀಡಿತರು, ಕಷ್ಟಗಳಿಂದ ಬಳಲುತ್ತಿರುವವರು, ಮೋಸ ಹೋಗಿರುವವರು, ಹೀಗೆ ಏನೇ ಸಮಸ್ಯೆ ಇದ್ದರೂ ಭಕ್ತರು ಇಲ್ಲಿಗೆ ಬಂದು ದೇವಿಯನ್ನು ಬೇಡಿಕೊಳ್ಳುತ್ತಾರೆ. ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದ್ರೆ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಅನ್ನೋದು ನಂಬಿಕೆ. ಹಾಸನಾಂಬೆಯ ಭಕ್ತರು ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನವೇ ಬಂದು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ.
ಹಚ್ಚಿದ ದೀಪ ಆರಲ್ಲ.. ಮುಡಿದ ಹೂ ಬಾಡಲ್ಲ..!!
ಅನಾದಿ ಕಾಲದಿಂದಲೂ ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಗರ್ಭಗುಡಿಯಲ್ಲಿರುವ ಹಾಸನಾಂಬೆಯನ್ನು ನೋಡಲು ಭಕ್ತರು ಒಂದು ವರ್ಷ ಕಾಯಬೇಕು. ಇಲ್ಲಿನ ವಿಶೇಷ ಮತ್ತು ಅಚ್ಚರಿಯ ವಿಷಯವೆಂದರೆ, ಗರ್ಭಗುಡಿಯಲ್ಲಿ ಒಂದು ವರ್ಷದ ಹಿಂದೆ ಹಚ್ಚಿರುವ ದೀಪ ಆರುವುದೇ ಇಲ್ಲ. ಜೊತೆಗೆ ದೇವಿಗೆ ಮುಡಿಸಿದ ಹೂ ಬಾಡುವುದೂ ಇಲ್ಲ. ಅಷ್ಟೇ ಅಲ್ಲದೇ, ಹಾಸನಾಂಬೆಗೆ ಇಟ್ಟ ನೈವೇದ್ಯ ಅಕ್ಕಿ ಅನ್ನವಾಗಿರುತ್ತದೆ. ಕೆಡುವುದೂ ಇಲ್ಲ. ಈ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು.
ಹಾಸನಾಂಬೆಯ ಇತಿಹಾಸ :
ಹಾಸನಾಂಬೆ ದೇಗುಲವನ್ನು 12ನೇ ಶತಮಾನದ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಸಪ್ತಮಾತೃಕೆಯರಲ್ಲಿ ಮೂವರು ತಾಯಂದಿರು ಈ ದೇವಸ್ಥಾನದಲ್ಲಿ ನೆಲೆಸಿದ್ದಾರೆ. ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಅವರು ಭೂಮಿಗೆ ಬಂದಾಗ ಹಾಸನದ ಸೌಂದರ್ಯಕ್ಕೆ ಮಾರುಹೋಗಿ ಇಲ್ಲೇ ನೆಲೆಸಲು ನಿರ್ಧರಿಸಿದರಂತೆ. ಅವರಲ್ಲಿ ಮಹೇಶ್ವರಿ, ಕೌಮಾರಿ, ವೈಷ್ಣವಿ ಹಾಸನದಲ್ಲಿ ನೆಲೆಸಿದ್ದಾರೆ. ಬ್ರಾಹ್ಮೀ ಮತ್ತು ಇಂದ್ರಾಣಿ ಕೆಂಚಮ್ಮ ಹೊಸಕೋಟೆಯಲ್ಲಿಯೂ, ವಾರಾಹಿ ಮತ್ತು ಚಾಮುಂಡಿ ದೇವಿ ಒಂದು ಬಾವಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದು ಕಥೆಯೂ ಈ ದೇವಸ್ಥಾನಕ್ಕಿದೆ. 12 ನೇ ಶತಮಾನದಲ್ಲಿ ಪಾಳೇಗಾರ ಕೃಷ್ಣಪ್ಪ ನಾಯಕ ಎಂಬಾತ ಪ್ರಯಾಣಕ್ಕೆಂದು ಹೊರಟಾಗ ಮೊಲವೊಂದು ಅಡ್ಡ ಬಂದಿತ್ತು. ಮೊಲ ಅಡ್ಡ ಬಂದಿದ್ದಕ್ಕೆ ಅಪಶಕುನ ಎಂದು ಭಾವಿಸಿದ. ಆಗ ಆದಿಶಕ್ತಿ ಸ್ವರೂಪಿಣಿ ಪ್ರತ್ಯಕ್ಷರಾಗಿ ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುತ್ತೇನೆ ಎಂದರಂತೆ. ಆದ್ದರಿಂದ ಕೃಷ್ಣಪ್ಪ ನಾಯಕ ದೇಗುಲ ಕಟ್ಟಿಸಿದ್ದಾನೆ ಎಂದು ಕುದುರು ಗಂಡಿ ವೀರಗಲ್ಲಿನ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅದೇನೇ ಇರಲಿ ಹಾಸನಾಂಬೆಯ ಗರ್ಭಗುಡಿಯಲ್ಲ ವರ್ಷ ಕಳೆದರೂ ಆರದ ದೀಪ, ಬಾಡದ ಹೂ ವಿಜ್ಷಾನಕ್ಕೂ ಸವಾಲಾಗಿದೆ. ದೇವಿಯ ಪವಾಡ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ.
ಹಚ್ಚಿದ ದೀಪ ಆರಲ್ಲ.. ಮುಡಿದ ಹೂ ಬಾಡಲ್ಲ ಇಟ್ಟ ನೈವೇದ್ಯ ತಿಂಗಳುಗಳ ಕಾಲ ಕೆಡಲ್ಲ ವಿಜ್ಞಾನಕ್ಕೂ ಸವಾಲಾದ ಹಾಸನಾಂಬೆ ಮಹಿಮೆ ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ತಾಯಿ ಭಕ್ತಿಯಿಂದ ಬೇಡಿದರೆ ವರ ಕೊಡುವ ಹಾಸನಾಂಬೆ
Also Read : Reckless Wheeling: BJP Legislator Draws Criticism | ಆಪಾಯಕಾರಿ ವೀಲಿಂಗ್… ಬಿಜೆಪಿ ಶಾಸಕರ ವೀರಾವೇಶ.
