Delhi CM Attacked|ದೆಹಲಿ ಸಿ.ಎಂಗೆ ಕಪಾಳಮೋಕ್ಷ!

ಅದೇನೋ ಗೊತ್ತಿಲ್ಲ, ದೆಹಲಿ ಮುಖ್ಯಮಂತ್ರಿಯಾದವರಿಗೆ ಕಪಾಳಮೋಕ್ಷಭಾಗ್ಯ ಕಟ್ಟಿಟ್ಟ ಬುತ್ತಿ ಅಂತ ಅನುಮಾನ ರ‍್ತಿದೆ. ಈ ಹಿಂದೆ ಸಿ.ಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಅವರಿಗೂ ಒಬ್ಬ ವ್ಯಕ್ತಿ ಕಪಾಳಕ್ಕೆ ಬಾರಿಸಿದ್ದ. ನಂತರ ಅದೇ ಕೇಜ್ರಿವಾಲ್‌ಗೆ ಮತ್ತೊಬ್ಬ ವ್ಯಕ್ತಿ ಮುಖಕ್ಕೆ ಇಂಕ್ ಕೂಡ ಹಾಕಿದ್ದ. ಆದರೆ ಈಗ ಈಗಿನ ಮುಖ್ಯಮಂತ್ರಿ ರೇಖಾಗುಪ್ತ ಅವರಿಗೆ ವ್ಯಕ್ತಿಯೊಬ್ಬ ಕೋಪದಿಂದ ಕೆನ್ನೆಗೆ ಬಾರಿಸಿದ್ದಾನೆ. ರೇಖಾ ಗುಪ್ತಾ ಅವರ ಅಧಿಕೃತ ನಿವಾಸದಲ್ಲಿಯೇ ಈ ಘಟನೆ ನಡೆದಿದೆ. ಮುಖ್ಯಮಂತ್ರಿಯವರು ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾಗ ಕಪಾಳಮೋಕ್ಷ ನಡೆದಿದೆ ಎಂದು ಭಾರತೀಯ ಜನತಾ ಪಕ್ಷ ಅಧಿಕೃತವಾಗಿ ಆರೋಪಿಸಿದೆ. ಸುಮಾರು ೩೫ ವರ್ಷದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯವರ ಬಳಿ ಕೆಲವು ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ. ಅವರ ಜೊತೆ ಮಾತನಾಡುತ್ತಿದ್ದ ಆ ವ್ಯಕ್ತಿ ನೋಡನೋಡುತ್ತಿದ್ದಂತೆ ಸಿ.ಎಂ ಗೆ ಕಪಾಳಮೋಕ್ಷ ಮಾಡಿದ್ದಾನೆ. ಅದೇ ಸಮಯದಲ್ಲಿ ಆತ ರೇಖಾ ಗುಪ್ತಾ ಅವರ ಕೂದಲು ಸಹ ಎಳೆದಿದ್ದಾನೆ. ತಕ್ಷಣವೇ ಮುಖ್ಯಮಂತ್ರಿಗಳ ಅಂಗರಕ್ಷಕರು ಮಧ್ಯೆ ಪ್ರವೇಶ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಸಿಎಂ ರೇಖಾ ಗುಪ್ತಾಗೆ ಯಾವುದೇ ಗಾಯಗಳಾಗಿಲ್ಲವಾದರೂ, ಈ ಅನಿರೀಕ್ಷಿತ ಘಟನೆ ಅವರಿಗೆ ಆಘಾತವನ್ನುಂಟುಮಾಡಿದೆ.
ಈ ಮಧ್ಯೆ, ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು ರೇಖಾ ಗುಪ್ತಾ ಅವರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಅವರು ಕೂಡ ದಾಳಿಯನ್ನು ಖಂಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲದಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ವ್ಯಕ್ತಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಇದೀಗ ದೆಹಲಿ ಪೊಲೀಸರು ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನೆಡೆಸುತ್ತಿದ್ದಾರೆ. ಆತನ ಹಿನ್ನೆಲೆ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಕೆನ್ನೆಗೆ ಹೊಡೆದ ಈ ವ್ಯಕ್ತಿ ಗುಜರಾತ್‌ನ ರಾಜ್‌ಕೋಟ್ ಮೂಲದ ೪೧ ವರ್ಷದ ರಾಕೇಶ್ ಕಿಮ್‌ಜಿ ಸಕಾರಿಯ ಎಂದು ತಿಳಿದು ಬಂದಿದೆ. ಏನೇ ಆಗಲಿ, ದೆಹಲಿ ಜನ ಕೋಪ ಬಂದರೆ ಮುಖ್ಯಮಂತ್ರಿ ಅನ್ನೋದನ್ನೂ ನೋಡೋದಿಲ್ಲ ಅನ್ನೋದು ಅರವಿಂದ್ ಕೇಜ್ರಿವಾಲ್ ಹಾಗೂ ರೇಖಾಗುಪ್ತ ಅವರ ಕಪಾಳಮೋಕ್ಷ ಪ್ರಕರಣಗಳಿಂದ ಸಾಬೀತಾಗಿದೆ.

Leave a Reply

Your email address will not be published. Required fields are marked *