Ballari Banner Clash: The Secret Behind Blood Politics…! | ಬಳ್ಳಾರಿ ಬ್ಯಾನರ್ ಬಡಿದಾಟ, ರಕ್ತ ರಾಜಕೀಯದ ಸೀಕ್ರೆಟ್…!
ಬ್ಯಾನರ್ ಬಡಿದಾಟಕ್ಕೆ ಬಳ್ಳಾರಿ ನಗರ ಹೊತ್ತಿ ಉರಿಯುತ್ತಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿ ಬ್ಯಾನರ್ ಕಟ್ಟುವ ವಿಷಯಕ್ಕೆ ಒಬ್ಬನ ಬಲಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಶಾಸಕ ಭರತ್ರೆಡ್ಡಿ ಹಾಗೂ ಪ್ರತಿಪಕ್ಷ ಬಿಜೆಪಿ ಶಾಸಕ ಜನಾರ್ದನರೆಡ್ಡಿ ಸೇರು ಸವ್ವಾಸೇರು ಅಂತಾ ಪರಸ್ಪರ ವಾದ್ದಾಳಿ ಮಾಡಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಇದರ ಹಿಂದೆ ಭಾರಿ ರಾಜಕೀಯ ಲೆಕ್ಕಾಚಾರವೇ ಅಡಗಿದೆ. ಹೌದಾ..? ಹಾಗಾದರೆ ಅದೇನು..?
ಹೌದು, ಬಳ್ಳಾರಿ ಅಂದ್ರೆ ಹಾಗೇನೆ. ಅದಕ್ಕೊಂದು ರಕ್ತಚರಿತ್ರೆ ಇದೆ. ಈಗ ಮಹರ್ಷಿ ವಾಲ್ಮೀಕಿ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯ ಶಾಸಕರಿಬ್ಬರು ಸೇರು ಸವ್ವಾಸೇರು ಅಂತಾ ಪ್ರತಿಷ್ಠೆಗಿಳಿದಿದ್ದಾರೆ. ಏಕ ವಚನದಲ್ಲೇ ಪರಸ್ಪರ ಬೈದಾಡಿಕೊಂಡಿದ್ದಾರೆ. ಇದು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಧರ್ಮಸಂಕಟ ತಂದೊಡ್ಡಿದೆ. ತಮ್ಮ ನಾಯಕರ ಮಾತನ್ನು ಮೊಂಡು ಆದೇಶವನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಅವರದ್ದಾಗಿದೆ. ಈಗ ವಾಲ್ಮೀಕಿ ಬ್ಯಾನರ್ ವಿಚಾರಕ್ಕೆ ಶಾಸಕ ಭರತ್ರೆಡ್ಡಿ ಬೆಂಬಲಿಗ ರಾಜಶೇಖರ್ ರೆಡ್ಡಿ ಬಲಿಯಾಗಿದ್ದಾನೆ. ಇದು ಮೇಲ್ನೋಟಕ್ಕೆ ಎಲ್ಲರಿಗೂ ಕಂಡು ಬಂದಿರುವ ವಿಚಾರ.
ಈಗಾಗಲೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿದೆ…!
ಇದಕ್ಕೆ ಜನಾರ್ದನರೆಡ್ಡಿ ಬೇರೆಯದ್ದೇ ವಿಷಯ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಅಂಗರಕ್ಷಕರು ನನ್ನನ್ನೇ ಮುಗಿಸಲು ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ಶಾಸಕ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಸಾವಿಗೆ ಜನಾರ್ದನರೆಡ್ಡಿ ಕಾರಣ ಎಂದು ಶಾಸಕ ಭರತ್ರೆಡ್ಡಿ ಆರೋಪಿಸಿದ್ದಾರೆ. ಅಸಲಿಗೆ ಹೀಗೆ ಬಳ್ಳಾರಿಯಲ್ಲಾದ ರಕ್ತ ರಾಜಕೀಯದ ಹಿಂದೆ ಭಾರಿ ರಾಜಕೀಯ ಲೆಕ್ಕಾಚಾರ ಅಡಗಿದೆ.ಇದು ಕೇವಲ ಬಳ್ಳಾರಿಗೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ಬಹುದೊಡ್ಡ ಲೆಕ್ಕಾಚಾರವೇ ಅಡಗಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ಮತಲೆಕ್ಕ ಇದೆ. ಇದಕ್ಕೆ ಗಣಿನಾಡು ಬಳ್ಳಾರಿಯಿಂದಲೇ ನಾಂದಿ ಹಾಡಲಾಗಿದೆ ಎನ್ನಲಾಗಿದೆ.

ಇಷ್ಟಕ್ಕೂ ಬ್ಯಾನರ್ ಬಡಿದಾಟದ ಹಿಂದಿರುವ ಮತಗಳ ಲೆಕ್ಕಾಚಾರವಾದರೂ ಏನು..? ಅದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಆಗುವ ರಾಜಕೀಯ ಲಾಭವಾದರೂ ಏನು.. ಅದರ ಹಿಂದಿರುವ ಮತ ಮರ್ಮವಾದರೂ ಏನು ಎಂಬುದನ್ನು ನೋಡುವುದಾದರೆ.. ಬಳ್ಳಾರಿ ಬ್ಯಾನರ್ ಬಡಿದಾಟದ ಹಿಂದೆ ಭಾರಿ ಮತ ಲೆಕ್ಕ ಅಡಗಿದೆ.ಅದು ಹೇಗೆ ಅಂದ್ರೆ. ನೇರವಾಗಿ ಒಂದು ಸಮುದಾಯದ ಮತಗಳನ್ನು ಸೆಳೆಯುವುದು. ರಾಜ್ಯದ ವಿವಿಧೆಡೆ ವಾಲ್ಮೀಕಿ ನಾಯಕ ಸಮುದಾಯದ ಮತದಾರರೇ ನಿರ್ಣಾಯಕರು. ಹಾಗಾಗಿ ಆ ಸಮುದಾಯದ ಮತದಾರರ ಮನಸ್ಸು ಗೆಲ್ಲುವುದೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ರಾಜತಂತ್ರವಾಗಿದೆ. ಕೆಲವೆಡೆ ವಾಲ್ಮೀಕಿ ಸಮುದಾಯದ ನಾಯಕರು ಕಾಂಗ್ರೆಸ್ ಪರವಾಗಿದ್ದಾರೆ. ವಿಶೇಷವಾಗಿ ಬಳ್ಳಾರಿ ಭಾಗದಲ್ಲಿ ವಾಲ್ಮೀಕಿ ಸಮುದಾಯದ ಮತದಾರರು ಸಾಕಷ್ಟಿದ್ದಾರೆ. ಕೆಲವೆಡೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಬಳ್ಳಾರಿ ಭಾಗದಲ್ಲಿ ಅದೇ ಸಮುದಾಯದ ನಾಯಕ ಮಾಜಿ ಸಚಿವ ಶ್ರೀರಾಮುಲು ಅವರಿದ್ದಾರೆ. ಹಾಗಾಗಿ ಸಹಜವಾಗಿಯೇ ಆ ಸಮುದಾಯದ ಮತದಾರರು ರಾಮುಲು ಅವರ ಬೆಂಬಲಿಕ್ಕಿದ್ದಂತೆ ಕಾಣುತ್ತಿದೆ.
ಬಳ್ಳಾರಿ ಬ್ಯಾನರ್ ಬಡಿದಾಟದ ಹಿಂದೆ ವಾಲ್ಮೀಕಿ ಸಮುದಾಯದ ಮತಗಳ ಭಾರಿ ಲೆಕ್ಕಾಚಾರ…?
ಈಗಾಗಲೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಒಂದು ರೀತಿಯಲ್ಲಿ ಶಾಸಕ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರಿಬ್ಬರಿಗೂ ಒಂದು ರೀತಿಯ ಹಿನ್ನಡೆ. ಇನ್ನೊಂದು ಕಡೆ ಕಾಂಗ್ರೆಸ್ಸಿಗೆ ವಾಲ್ಮೀಕಿ ಮತದಾರರನ್ನು ಮತ್ತಷ್ಟು ಸೆಳೆಯುವ ಚಿಂತನೆ. ಹೀಗೆ ವಾಲ್ಮೀಕಿ ಸಮುದಾಯದ ಮತದಾರರನ್ನು ತಮ್ಮತ್ತ ಸೆಳೆಯುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸಂಘರ್ಷಕ್ಕೆ ಅಮಾಯಕ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ. ಪ್ರಶಾಂತವಾಗಿದ್ದ ಗಣಿನಾಡು ಬಳ್ಳಾರಿ ನಿಗಿ ನಿಗಿಯಾಗಿದೆ. ಜನ ಅನುಕ್ಷಣ ಆತಂಕದಿಂದ ಬದುಕು ದೂಡುವಂತಾಗಿದೆ. ಭದ್ರತೆ ಸುಮಾರು ನಾಲ್ಕು ಜಿಲ್ಲೆಗಳ ಪೊಲೀಸರು ಬಳ್ಳಾರಿಯಲ್ಲಿ ಭದ್ರತೆ ಒದಗಿಸಿದ್ದಾರೆ. ಇದು ಜನರ ನೆಮ್ಮದಿ ಕೆಡಿಸಿದೆ.
ಈ ಬಗ್ಗೆ ಅದೇ ಸಮುದಾಯದ ಪ್ರಬಾವಿ ಮಂತ್ರಿ ಸತೀಶ್ ಜಾರಕಿಹೊಳಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಜಯಂತಿ ಇರುವ ಒಂದು ದಿನ ಮೊದಲೇ ಬ್ಯಾನರ್ ಕಟ್ಟಲಾಗುತ್ತಿದೆ ಎಂದಿದ್ದಾರೆ.
ಒಟ್ಟಾರೆ ಬಳ್ಳಾರಿ ಬ್ಯಾನರ್ ಬಡಿದಾಟದ ಹಿಂದೆ ವಾಲ್ಮೀಕಿ ಸಮುದಾಯದ ಮತಗಳ ಭಾರಿ ಲೆಕ್ಕಾಚಾರ ಅಡಗಿದೆ. ಹಾಗಾಗಿಯೇ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳ ಮುಖಂಡರು ಜಿದ್ದಿಗೆ ಬಿದ್ದಿದ್ದಾರೆ. ಇದರಲ್ಲಿ ಅಮಾಯಕ ರಾಜಶೇಖರರೆಡ್ಡಿ ಬಲಿಯಾಗಿದ್ದಾನೆ. ಬಳ್ಳಾರಿಯ ಬ್ಯಾನರ್ ಬಡಿದಾಟದ ರಕ್ತ ರಾಜಕೀಯ ಮತ್ತೆಲ್ಲಿಗೆ ತಲುಪುತ್ತದೆ ಎಂಬುದೇ ಸದ್ಯದ ಪ್ರಶ್ನೆ.
=====================================
Read More : Janardhan Reddy V/S Bharath Reddy | ರೆಡ್ಡಿ vs ರೆಡ್ಡಿ, ರಕ್ತ ರಾಜಕೀಯ !
