VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!
ವಿಬಿ ಜಿ ರಾಮ್ ಜಿ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. 45 ದಿನಗಳ ಮನರೇಗಾ ಬಚಾವೋ ಅಭಿಯಾನವನ್ನು ದೇಶಾದ್ಯಂತ ಆರಂಭಿಸುವುದಾಗಿ ಘೋಷಿಸಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ನಾಗರಿಕರ ಉದ್ಯೋಗ ಹಕ್ಕನ್ನು ದುರ್ಬಲಗೊಳಿಸುತ್ತಿದ್ದು, ಮನರೇಗಾ ಕಾಯ್ದೆಯನ್ನು ಹಾಳು ಮಾಡುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿಬಿ-ಜಿ ರಾಮ್ ಜಿ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ??
ಕೇಂದ್ರದ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ, ಮನರೇಗಾ ರದ್ಧತಿಯನ್ನು ಖಂಡಿಸಿ ಕಾಂಗ್ರೆಸ್ ಜ. 8ರಿಂದ ಫೆ. 25ರ ವರೆಗೆ ರಾಷ್ಟ್ರವ್ಯಾಪಿ ಆಂದೋಲನ ಮಾಡುವ ಎಚ್ಚರಿಕೆ ನೀಡಿದೆ. ವಿಬಿ-ಜಿ ರಾಮ್ ಜಿ ಕಾಯ್ದೆ ಮನರೇಗಾವನ್ನು ಮೌನವಾಗಿ ಕೊಲ್ಲುತ್ತದೆ ಎಂದು ಹೇಳಿರುವ ಕಾಂಗ್ರೆಸ್ ಮನರೇಗಾ ಬಚಾವೋ ಅಭಿಯಾನ ನಡೆಸುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಕಾಯ್ದೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಜೈರಾಮ್ ರಮೇಶ್ ಅಭಿಯಾನ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್‌ಜಿ ಕಾನೂನಿನ ಬಗ್ಗೆ ಗಂಭೀರ ಚರ್ಚೆ ನಡೆಸಿ ನಾವು ಈ ಅಭಿಯಾನ ನಡೆಸುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗ್ರಾಮೀಣ ಜನರ ಬದುಕಿನ ಉದ್ಯೋಗ ಕಸಿಯುವ ದುರುದ್ದೇಶ….??
ಇನ್ನು ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷವೂ ವಿರೋಧ ವ್ಯಕ್ತಪಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೆ ಗ್ರಾಮೀಣ ಜನರ ಬದುಕಿನ ಉದ್ಯೋಗ ಕಸಿಯುವ ದುರುದ್ದೇಶವಿದು. ಮನರೇಗಾ ಕಾಯ್ದೆ ರದ್ದು ಮಾಡಿ ಜಾರಿಗೆ ತರಲು ಮುಂದಾಗಿರುವ ವಿಬಿ-ಜಿ ರಾಮ್‌ಜಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಒಮ್ಮತದಿಂದ ಧಿಕ್ಕರಿಸಿದೆ !!
ಇಷ್ಟೇ ಅಲ್ಲದೇ, ತೆಲಂಗಾಣ ವಿಧಾನಸಭೆಯಲ್ಲಿ ಮನರೇಗಾ ಕಾಯ್ದೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಣಯವೊಂದನ್ನು ಅಂಗೀಕರಿಸಿದೆ. ಹೊಸ ವಿಬಿ-ಜಿ ರಾಮ್ ಜಿ ಕಾಯ್ದೆ ಬಡವರಿಗೆ ಹಾನಿಕಾರಕವಾಗಿದೆ. ಜೊತೆಗೆ ಉದ್ಯೋಗ ಖಾತರಿ ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಿದೆ ಎಂದು ವಿಧಾನಸಭೆಯಲ್ಲಿ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹೇಳಿದ್ದಾರೆ. ಒಟ್ನಲ್ಲಿ ಮನರೇಗಾ ಬಚಾವೋ ಅಭಿಯಾನ ಜನವರಿ 8ರಂದು ಪ್ರಾರಂಭವಾಗಿ 45 ದಿನಗಳವರೆಗೆ ನಡೆಯಲಿದ್ದು, ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಒಮ್ಮತದಿಂದ ಧಿಕ್ಕರಿಸಿದೆ. ಅಗತ್ಯ ಬಿದ್ದರೆ ಕಾಯ್ದೆಯನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆಯನ್ನೂ ಕಾಂಗ್ರೆಸ್ ನೀಡಿದೆ.
===========================
Also Read : Actor Yash’s Mother Pushpa’s House Demolished in Hassan | ಯಶ್ ತಾಯಿಗೆ ಭೂ ಕಂಟಕ, ಟಾಕ್ಸಿಕ್‌ಗೆ ಮುಳುವಾಗುತ್ತಾ ?
