Bellary Mining Scam Returns: Will Reddy Face Jail..? | ಮತ್ತೆ ಗಡಿಯಲ್ಲಿ ಗಣಿ ಲೂಟಿ, ಜೈಲು ಪಾಲಾಗ್ತಾರಾ ರೆಡ್ಡಿ.?
ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೇಯಲ್ಲಿ, ಆಂಧ್ರದ ಗಣಿ ಕಂಪನಿಗಳು ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ. ಈ ವರದಿ ಬೆನ್ನಲ್ಲೇ ಇದೀಗ ಶಾಸಕ ಜನಾರ್ದನ್ ರೆಡ್ಡಿಗೆ ಸಂಕಷ್ಟ ಎದುರಾಗಿದೆ.
ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿಗೆ ಮತ್ತೆ ಗಣಿ ಲೂಟಿ ಸಂಕಷ್ಟ ಎದುರಾಗಿದೆ. ಆಂಧ್ರದ ಅನುಮತಿ ಬಳಸಿ ಕರ್ನಾಟಕದ ಗಡಿ ಒತ್ತುವರಿ ಮಾಡಿದ್ದ ಆರೋಪ ಸಂಬಂಧ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸುದಾಂಶು ದುಲಿಯಾ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಬಳ್ಳಾರಿಗೆ ಕಳೆದ ತಿಂಗಳು ಸರ್ವೇಗೆ ಬಂದಿದ್ದ ನಿವೃತ್ತ ನ್ಯಾ. ಸುದಾಂಶು ದುಲಿಯಾ ನೇತೃತ್ವದ ಸಮಿತಿಯಿಂದ ಗಡಿ ಒತ್ತುವರಿ ಬಗ್ಗೆ ವರದಿ ಸಲ್ಲಿಕೆ ಮಾಡಿದೆ.
ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ……!
ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಡ್ರೋಣ್ ಮೂಲಕ ಸರ್ವೇ ಮಾಡಲಾಗಿದೆ. ಇದರಲ್ಲಿ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇರ್, ಒಎಂಪಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ಮಾಡಿತ್ತು.
ಈ ಸರ್ವೇಯಲ್ಲಿ ಜನಾರ್ದನ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಸದ್ಯ ಈ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎಂಬುದು ದೃಢಪಟ್ಟಿದ್ದು, ಇದೀಗ ಜನಾರ್ದನ್ ರೆಡ್ಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಶಾಸಕ ಜನಾರ್ದನ್ ರೆಡ್ಡಿಗೆ ಸಂಕಷ್ಟ…?
ಕರ್ನಾಟಕ ಮತ್ತು ಆಂಧ್ರದ ನಡುವಿನ ಗಡಿ ನಾಶ ಪಡಿಸಿ, ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅಕ್ರಮ ಅದಿರು ಸಾಗಾಟ ಮಾಡಿದ ಆರೋಪ ಇದೆ. ಈಗಾಗಲೇ ಅಕ್ರಮ ಸಾಬೀತಾಗಿ ಆಂಧ್ರದ ಸಿಬಿಐ ವಿಚಾರಣಾಧೀನ ನ್ಯಾಯಾಲಯ ಜನಾರ್ದನ ರೆಡ್ಡಿಗೆ ಶಿಕ್ಷೆಯನ್ನೂ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿ ರೆಡ್ಡಿ ನೀಡಿದ್ದ ವರದಿ ಅನ್ವಯ ಕೋರ್ಟ್ ಹೊಸ ಸಮಿತಿ ರಚಿಸಿತ್ತು. ಸದ್ಯ ಈಗಿನ ನಿವೃತ್ತ ನ್ಯಾ. ದುಲಿಯಾ ಸಮಿತಿ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎನ್ನುವುದು ದೃಢ ಪಟ್ಟಿದೆ.
ನಿವೃತ್ತಿ ನ್ಯಾ. ದುಲಿಯಾ ವರದಿಗೆ ಗಣಿಗುತ್ತಿಗೆ ಪಡೆದ ಮಾಲೀಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಜನವರಿ 5 ರಂದು ದೆಹಲಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ದಾಖಲೆ ಸಲ್ಲಿಸದಿದ್ದರೆ ದುಲಿಯಾ ಸಮಿತಿ ವರದಿಯನ್ನು ಮೂರು ತಿಂಗಳ ಒಳಗೆ ಅಂತಿಮಗೊಳಿಸಿ, ವರದಿ ಆಧಾರ ಮೇಲೆ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. ಒಟ್ನಲ್ಲಿ ರಾಜ್ಯದ ಗಡಿ ಭಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿ ಲೂಟಿ ಮಾಡಲಾಗಿದೆ ಎನ್ನುವುದು ವರದಿಯಲ್ಲಿ ಸಾಬೀತಾಗಿದೆ. ಮುಂದೆ ಶಾಸಕ ಜನಾರ್ಧನ್ ರೆಡ್ಡಿಗೆ ಶಿಕ್ಷೆಯಾಗಬಹುದು ಎಂಬ ಬಗ್ಗೆ ಕಾದು ನೋಡಬೇಕಿದೆ.
Also Read : 2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್‌ಗೆ ಬ್ರೇಕ್ | Focus TV Kannada
