Thackeray Brothers Unity | ಕೆಟ್ಟ ಮೇಲೆ ಬಂತು ಬುದ್ಧಿ, ಠಾಕ್ರೆ ಸಹೋದರರ ಒಗ್ಗಟ್ಟು…!
ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಬಲ್ಲ ನಿರ್ಧಾರ ಹೊರಬಿದ್ದಿದೆ. ಇದು ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿ, ಶಿವಸೇನೆ, ಎನ್‌ಸಿಪಿ ಅಜಿತ್ ಪವಾರ್ ಬಣ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಕಂಪನ ಸೃಷ್ಟಿಸಿದೆ. ಮಹಾಯುತಿ ಮುಖಂಡರಿಗೆ ಆತಂಕ ಸೃಷ್ಟಿಸಿದೆ. ಏನಿದು..? ಅಂತೀರಾ..?
ಹೌದು, ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಕ್ರಾಂತಿಯಾಗುವ ಲಕ್ಷಣಗಳು ಗೋಚರಿಸಿವೆ. ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿಲಲ್ಲೇ ಇಂತಹ ಬೆಳವಣಿಗೆಯಾಗಿದೆ. ಕಳೆದ ಹಲವು ದಶಕಗಳಿಂದ ಬದ್ಧವೈರಿಗಳಾಗಿದ್ದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದಾರೆ. ಶಿವಸೇನೆ ಉದ್ಧವ್ ಠಾಕ್ರೆ ಬಣ ಹಾಗೂ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಮೈತ್ರಿ ಘೋಷಿಸಿದೆ. ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇಬ್ಬರೂ ಒಟ್ಟಾಗಿ ಸ್ಪರ್ಧಿಸುವುದಾಗಿ ಸಹೋದರರು ಘೋಷಿಸಿದ್ದಾರೆ. ಮರಾಠಿ ಜನರ ಏಕತೆ ಮತ್ತು ಅಸ್ಮಿತೆಗಾಗಿ ನಾವು ಸಹೋದರರು ಒಂದಾಗುತ್ತಿದ್ಧೇವೆ. ಇನ್ನು ಮುಂದೆ ರಾಜ್ಯದಲ್ಲಿ ಮರಾಠಿಗರನ್ನು ಒಡೆದು ಆಳುವ ರಾಜಕಾರಣ ನಡೆಯುವುದಿಲ್ಲಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ)ಗೆ ಎಚ್ಚರಿಕೆ ನೀಡಿದರು.
ಮುಂಬೈನ ಛತ್ರಪತಿ ಶಿವಾಜಿ ಪಾರ್ಕ್‌ನಲ್ಲಿರುವ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಠಾಕ್ರೆ ಕುಟುಂಬ, ಒಗ್ಗಟ್ಟು ಪ್ರದರ್ಶಿಸಿತು. ಈ ವೇಳೆ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಪತ್ನಿ ಮತ್ತು ಮಕ್ಕಳು ಕೂಡ ಜೊತೆಯಾಗಿ ಕಾಣಿಸಿಕೊಂಡರು. ಈ ಮೂಲಕ ಅವರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಾಯುತಿಗೆ ಪ್ರಚಂಡ ಗೆಲುವು ಲಭಿಸಿತ್ತು.ಭಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಶಿವಸೇನೆ (ಯುಬಿಟಿ) ಬಣಕ್ಕೆ ಸೋಲಿನ ಆಘಾತ ಎದುರಾಗಿತ್ತು. ಈ ಫಲಿತಾಂಶದ ಬಳಿಕ ಉದ್ಧವ್ ಮತ್ತು ರಾಜ್ ನಡುವೆ ಮೈತ್ರಿ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿದ್ದವು. ಇದರಂತೆ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಠಾಕ್ರೆ ಸಹೋದರರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದು ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿಯಲ್ಲಿ ಕಂಪನ ಸೃಷ್ಟಿಸಿದೆ.
ಒಟ್ಟಾರೆ ಮೊದಲು ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಬಲಶಾಲಿಯಾಗಿದ್ದ ಶಿವಸೇನೆ ವಿಭಜನೆಯಿಂದಾಗಿ ಶಕ್ತಿ ಕಳೆದುಕೊಂಡಿತ್ತು. ಏಕನಾಥ್ ಶಿಂಧೆಯಿಂದಾಗಿ ಮತ್ತೊಮ್ಮೆ ಎರಡು ಹೋಳಾಗಿದ್ದ ಶಿವಸೇನೆಗೆ ಈಗ ರಾಜ್ ಠಾಕ್ರೆಯಿಂದಾಗಿ ಮತ್ತೆ ಶಕ್ತಿ ನೀಡುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಶಿವಸೇನೆ ಜೊತೆ ಸೇರುತ್ತಾ..? ಹೊಂದಾಣಿಕೆಗೆ ಮೊದಲ ಹೆಜ್ಜೆ ಇಡುತ್ತಾ..? ಆದರೆ, ಇದು ವರ್ಕೌಟ್ ಆಗುತ್ತಾ ಎಂಬುದೇ ಸದ್ಯದ ಕುತೂಹಲ.
